ಬ್ರೂಸ್, ಡೇವಿಡ್  
	 1855-1931, ಬ್ರಿಟಿಷ್ ವೈದ್ಯ, ಆಸ್ಟ್ರೇಲಿಯದ ಮೆಲ್ಬೋರ್ನಿನಲ್ಲಿ ಜನನ 29-5-1855. ಬ್ರೂಸನ ಜೀವಿತದ ಮೊದಲ ವರ್ಷಗಳು ಮೆಲ್ಬೋರ್ನಿನಲ್ಲೇ ಕಳೆದುವು; ಆನಂತರ ಈತನ ತಂದೆತಾಯಿಗಳು ಸ್ಕಾಟ್ಲೆಂಡಿಗೆ ಮರಳಿದರು. ಈತ ಎಡಿನ್‍ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯವಿಜ್ಞಾನ ಅಭ್ಯಾಸಮಾಡಿ ಅನಂತರ ಖಾಸಗೀ ವೈದ್ಯವೃತ್ತಿ ಕೈಗೊಂಡ. ಕೆಲಕಾಲದ ಬಳಿಕ ಯುದ್ಧ ಪಡೆಯ ವೈದ್ಯ ವಿಭಾಗಕ್ಕೆ ಸೇರಿ ಸೇವೆ ಸಲ್ಲಿಸಿದ. ಆ ಅವಧಿಯಲ್ಲಿ  ಈತನನ್ನು ಮೆಡಿಟರೇನಿಯನ್ ಪ್ರದೇಶದ ಮಾಲ್ಟ ದ್ಪೀಪಕ್ಕೆ ಕಳುಹಿಸಲಾಯಿತು ಅನಂತರ ನೆಟ್ಲೆಯಲ್ಲಿಯ ಆರ್ಮಿ ಮೆಡಿಕಲ್ ಸ್ಕೂಲಿನಲ್ಲಿ ಪೆಥಾಲಜಿ ಪ್ರಾಧ್ಯಾಪಕತ್ವ ವಹಿಸಿದ (1889-94). ದಟ್ಟ ಕಾಡುಗಳಲ್ಲಿ, ನೀರಿನ ಆಸರೆ ಇರುವಲ್ಲಿ ವಾಸಮಾಡುತ್ತ, ದನ, ಕುದುರೆ ಮುಂತಾದ ಪ್ರಾಣಿಗಳ ಹಾಗೂ ಮನುಷ್ಯರ ರಕ್ತ ಹೀರಿ ಮನುಷ್ಯನಲ್ಲೂ ನಿದ್ರಾವಾತರೋಗವನ್ನು (ಸ್ಲೀಪಿಂಗ್ ಸಿಕ್‍ನೆಸ್) ಉಂಟುಮಾಡುವ, ಟ್ರೈಪೆನೊಸಿಸ್ ರೋಗದ ವಾಹಕಗಳು ಎನಿಸುವ ಟ್ಸೇಟ್ಸೀ (ಗ್ಲಾಸಿನ) ನೊಣಗಳ ಬಗ್ಗೆ ಅಧ್ಯಯನ ಮಾಡಲು ದಕ್ಷಿಣ ಆಫ್ರಿಕಕ್ಕೆ ತೆರಳಿದ. ಅಲ್ಲಿಯ ಜೂಲೂಲ್ಯಾಂಡ್‍ನಲ್ಲಿ ಟ್ಸೇಟ್ಸೀ ನೊಣಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ, ಉಗಾಂಡದಲ್ಲಿ ಈ ಬಗ್ಗೆ ಈತ ನಡೆಸಿದ ಪ್ರಯೋಗಗಳಿಂದ ನಿದ್ರಾವಾತರೋಗಕ್ಕೆ ಟ್ಸೇಟ್ಸೀ ನೊಣಗಳೇ ಕಾರಣ ಎಂಬುದು ಸ್ಥಿರಪಟ್ಟಿತು.

	ಒಂದನೆಯ ಮಹಾಯುದ್ಧದ ಅವಧಿಯಲ್ಲಿ ಈತ ಲಂಡನ್ನಿನ ರಾಯಲ್ ಆರ್ಮಿ ಮೆಡಿಕಲ್ ಕಾಲೇಜಿನಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ. ಆ ಅವಧಿಯಲ್ಲಿ ಟ್ರೆಂಚ್ ಜ್ವರ ಮತ್ತು ಟಿಟಾನಸ್‍ಗಳನ್ನು (ಧನುರ್ವಾಯು) ಕುರಿತು ಪರೀಕ್ಷೆಗಳನ್ನು ನಡೆಸಿದ. ಏಕಾಣುಜೀವಿ ವಿಜ್ಞಾನದಲ್ಲಿ ಈತ ನಡೆಸಿದ ಮಹತ್ತರ ಸಂಶೋಧನೆಗಳಿಗಾಗಿ ಇವನಿಗೆ ರಾಯಲ್ ಸೊಸೈಟಿಯ ಫೆಲೋ ಗೌರವವೂ (4899) ನೈಟ್ ಪದವಿಯೂ (1908) ಸಂದುವು. 27 ನವೆಂಬರ್ 1931 ರಲ್ಲಿ ನಿಧನನಾದ.			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ